ಮಕಾವೊ
	ದಕ್ಷಿಣ ಚೀನ ಕರಾವಳಿ ಪ್ರದೇಶದಲ್ಲಿರುವ ಪೋರ್ಚುಗಲ್ಲಿನ ಸಾಗರೋತ್ತರ ಪ್ರಾಂತ್ಯ. ಇದು ಕ್ಯಾಂಟನ್ ನದೀಮುಖದಲ್ಲಿರುವ ಪರ್ಯಾಯ ದ್ವೀಪ ಮತ್ತು ಅದರ ಸಮೀಪದಲ್ಲಿರುವ ಟೈಪಾ ಮತ್ತು ಕೊಲೋನ್ ಎಂಬ ಎರಡು ಸಣ್ಣ ದ್ವೀಪಗಳನ್ನೊಳಗೊಂಡಿದೆ. ಚುಚಿಯಾಂಗ್ ನದಿ ಅಳಿವೆಯ ಪಶ್ಚಿಮ ಭಾಗದಲ್ಲಿದ್ದು ಹಾಂಗ್‍ಕಾಂಗಿಗೆ ಸುಮಾರು 64 ಕಿಮೀ ದೂರದಲ್ಲಿದೆ. ಮುಖ್ಯ ಭೂಭಾಗದಿಂದ ಈ ಪರ್ಯಾಯದ್ವೀಪವನ್ನು ಬ್ಯಾರಿಯರ್ ಗೇಟ್ ಪ್ರತ್ಯೇಕಿಸುತ್ತದೆ. ಚೀನಿ ಭಾಷೆಯಲ್ಲಿ ನಾವಿಕರ ರಕ್ಷಕ ದೇವತೆಯಾದ ಆ-ಮಂಗಾವೊ ಎಂಬ ಹೆಸರಿನ ಮೇಲೆ ಈ ಪ್ರಾಂತ್ಯಕ್ಕೆ ಮಕಾವೋ ಎಂಬ ಹೆಸರು ಬಂದಿದೆ. ಪ್ರಾಂತ್ಯದ ರಾಜಧಾನಿ ಮಕಾವೊ ನಗರ ಪರ್ಯಾಯ ದ್ವೀಪವನ್ನು ಪೂರ್ತಿ ಆಕ್ರಮಿಸಿಕೊಂಡಿದೆ. ಪ್ರಾಂತ್ಯದ ವಿಸ್ತೀರ್ಣ 16 ಚಕಿಮೀ. ಜನಸಂಖ್ಯೆ 2,60,227 (1975).

	ಮಕಾವೊ ನಾಲ್ಕು ಶತಮಾನಗಳಿಗೂ ಮೀರಿ ಪೋರ್ಚುಗೀಸರ ಅಧೀನದಲ್ಲಿದೆ. ಪೋರ್ಚುಗೀಸರು ಇಲ್ಲಿಗೆ ಮೊದಲು ಬಂದದ್ದು 1557ರಲ್ಲಿ. 1717ರಿಂದ 19ನೆಯ ಶತಮಾನದ ತನಕ ಯೂರೊಪಿಯನ್ ವ್ಯಾಪಾರಕ್ಕೆ ತೆರೆಯಲಾಗಿದ್ದ ಚೀನೀ ಬಂದರುಗಳೆಂದರೆ ಮಕಾವೊ ಮತ್ತು ಕ್ಯಾಂಟನ್ ಮಾತ್ರ. 18ನೆಯ ಶತಮಾನದ ಕೊನೆಯ ಭಾಗದ ವೇಳೆಗೆ ಹೊರದೇಶಗಳೊಡನೆ ಚೀನಾದ ವ್ಯಾಪಾರ ಕ್ರಮೇಣ ಕ್ಯಾಂಟನ್ನಿನಲ್ಲಿಯೇ ಕೇಂದ್ರೀಕೃತವಾಗಿ ವಿದೇಶೀ ವರ್ತಕರಿಗೆ ವ್ಯಾಪಾರಕೇಂದ್ರಗಳನ್ನು ಅಲ್ಲಿ ತೆರೆಯಲಾಯಿತು. ಆದರೆ ಅವರಿಗೆ ಕ್ಯಾಂಟನ್ನಿನಲ್ಲಿ ನವೆಂಬರ್-ಮೇ ಅವಧಿಯ ವ್ಯಾಪಾರ ಕಾಲದಲ್ಲಿ ಮಾತ್ರ ಪ್ರವೇಶವಿದ್ದುದರಿಂದ ಅಂತಾರಾಷ್ಟ್ರೀಯ ವ್ಯಾಪಾರೀ ಸಮುದಾಯ ಮಕಾವೋದಲ್ಲಿಯೇ ನೆಲಸಿತು. ಇದರಿಂದ ಮಕಾವೊ ಉಚ್ಛ್ರಾಯಸ್ಥಿತಿಗೆ ಬಂತು. ಆದರೆ ಅಪೀಮು ವ್ಯಾಪಾರದ ಬಗ್ಗೆ ಚೀನಿ ಮತ್ತು ಯೂರೋಪಿಯನ್ ವರ್ತಕರಲ್ಲಿ ಭಿನ್ನಾಭಿಪ್ರಾಯವುಂಟಾಗಿ ಬ್ರಿಟನ್ ಮತ್ತು ಚೀನಾಗಳಿಗೆ ಯುದ್ಧವಾಗಿ 1841ರಲ್ಲಿ ಹಾಂಗ್‍ಕಾಂಗ್ ಬ್ರಿಟಿಷ್ ವಸಾಹತಾಯಿತು. 1849ರಲ್ಲಿ ಪೋರ್ಚುಗೀಸರು ಮಕಾವೊದ ಚೀನಿ ಸುಂಕದ ಕಟ್ಟೆಯನ್ನು ತೆಗೆದುಹಾಕಿ ಈ ಪ್ರದೇಶದ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು. ಆದರೆ ಹಾಂಗ್‍ಕಾಂಗ್ ಬಲುಬೇಗನೆ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿ ಮಕಾವೊ ಪ್ರಾಮುಖ್ಯ ಕಡಿಮೆಯಾಯಿತು. 1887ರಲ್ಲಿ ಚೀನಾದೊಡನೆ ಪೋರ್ಚುಗಲ್ ಈ ಪ್ರದೇಶದ ಬಗ್ಗೆ ಒಪ್ಪಂದ ಮಾಡಿಕೊಂಡಿತು. ಆದರೆ ಇಂದಿನತನಕವೂ ಮಕಾವೊ ಗಡಿ ನಿಖರವಾಗಿ ನಿರ್ಧಾರವಾಗಿಲ್ಲ. 1967ರಲ್ಲಿ ಪೋರ್ಚುಗೀಸ್ ಆಡಳಿತ ಎಡಚೀನೀಯರಿಂದ ಪ್ರಬಲ ವಿರೋಧ ಎದುರಿಸಬೇಕಾಯಿತು. ಮಕಾವೊ ಪೋರ್ಚುಗೀಸ್ ರಾಜ್ಯಾಂಗದ ಕಾಯಿದೆಗಳಿಗೊಳಪಟ್ಟಿದ್ದರೂ ಆಂತರಿಕವಾಗಿ ಆಡಳಿತ ಮತ್ತು ಆರ್ಥಿಕ ಸ್ವಾತಂತ್ರ್ಯ ಹೊಂದಿದೆ. 1960ರಲ್ಲಿ ವಿಶ್ವಸಂಸ್ಥೆ ಇದನ್ನು ಸ್ವಯಮಾಡಳಿತವಿಲ್ಲದ ಪೋರ್ಚುಗೀಸ್ ಪ್ರದೇಶವಾಗಿ ಘೋಷಿಸಿದೆ. 1967ರಲ್ಲಿ ನಡೆದ ಕಮ್ಯೂನಿಸ್ಟ್ ದಂಗೆಗಳಿಂದ ಮಕಾವೊ ತೀವ್ರ ಧಕ್ಕೆಗೆ ಒಳಗಾಯಿತು. ಆಗ ಬ್ರಿಟನ್ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತು. ಇದರಿಂದ ಮಕಾವೊ ಮೇಲೆ ಪಿ ಕಿಂಗಿನ ಪ್ರಭಾವ ಮತ್ತಷ್ಟು ಹೆಚ್ಚಾಯಿತು.

	ಮಕಾವೊ ಪರ್ಯಾಯದ್ವೀಪದ ವಿಸ್ತೀರ್ಣ ಸುಮಾರು 5.17 ಚಕಿಮೀ. ಟೈಪಾ ದ್ವೀಪದ್ದು 3.88 ಚಕಿಮೀ ಮತ್ತು ಕೊಲೋನ್ ದ್ವೀಪದ್ದು 6.47 ಚಕಿಮೀ. ಇಲ್ಲಿಯ ಯಾವ ಭಾಗವೂ ಹೆಚ್ಚು ಎತ್ತರವಾಗಿಲ್ಲ. ಪ್ರಾಂತದ ಅತಿ ಹೆಚ್ಚು ಎತ್ತರದ ಪ್ರದೇಶ (174 ಮೀಟರ್) ಕೊಲೋನ್ ದ್ವೀಪದಲ್ಲಿದೆ. ಇಲ್ಲಿ ನದಿಗಳಿಲ್ಲ. ನೀರನ್ನು ಮಳೆಗಾಲದಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಅಲ್ಲದೇ ಚೀನಾದಿಂದಲೂ ತರಿಸಿಕೊಳ್ಳುತ್ತಾರೆ. ಈ ಪ್ರದೇಶದಲ್ಲಿ ಗ್ರಾನೈಟ್ ಕಲ್ಲುಗಳಿಂದಾದ ಸಣ್ಣ ಸಣ್ಣ ಗುಡ್ಡಗಳಿದ್ದು ಮಧ್ಯೆ ಅಲ್ಲಲ್ಲಿ ಮೆಕ್ಕಲುಮಣ್ಣಿನ ಸಮತಲ ಪ್ರದೇಶವಿದೆ. ಪೂರ್ವಭಾಗದಲ್ಲಿ ಭೂಮಿಯನ್ನು ಸಮತಲವಾಗಿಸಿ ವ್ಯವಸಾಯ ಯೋಗ್ಯವಾಗಿ ಮಾಡಿಕೊಂಡಿದ್ದಾರೆ. ಡಕ್ ಕಾಲುವೆ ಮುಖದಲ್ಲಿ ಪರ್ಯಾಯ ದ್ವೀಪದ ಪಶ್ಚಿಮಭಾಗ ಮತ್ತು ಚೀನೀ ಭೂಭಾಗದ ನಡುವೆ ಇಕ್ಕಟ್ಟಾದ ಸುರಕ್ಷಿತ ಜಲಪ್ರದೇಶವಿದೆ. ಇದಕ್ಕೆ ಪೋರ್ಟೊ ಇಂಟೀರಿಯರ್ (ಒಳಭಾಗದ ಬಂದರು) ಎಂದು ಹೆಸರು. ಬಲು ಹಿಂದಿನಿಂದಲೂ ಇದು ಹಡುಗುಗಳಿಗೆ ಸುರಕ್ಷಿತ ಲಂಗರು ನೆಲೆಯಾಗಿದ್ದು ಇತ್ತೀಚೆಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮತ್ತೊಂದು ಬಂದರಾದ ಪೋರ್ಟೊ ಎಕ್ಸ್ಟೀರಿಯರ್ (ಹೊರಭಾಗದ ಬಂದರು) ಪರ್ಯಾಯದ್ವೀಪದ ಪೂರ್ವಭಾಗದಲ್ಲಿದ್ದು ಇಲ್ಲಿ ಅಲೆಗಳ ಹೊಡೆತ ತಡೆಗಟ್ಟಲು ಒಡ್ಡುಗಳನ್ನು ಕಟ್ಟಲಾಗಿದೆ. ಇವೆರಡು ಬಂದರುಗಳ ಮೂಲಕ ಹಾಂಗ್‍ಕಾಂಗಿಗೆ ಪ್ರಯಾಣ ಸೌಕರ್ಯವಿದೆ.

	ಮಕಾವೊ ಉಷ್ಣವಲಯದಲ್ಲಿದೆ. ಬೇಸಿಗೆಯಲ್ಲಿ ಬಹಳ ಬಿಸಿಯಿದ್ದು ತೇವದಿಂದ ಕೂಡಿದ ಅಹಿತಕರ ಹವಾಗುಣವಿರುತ್ತದೆ. ಏಪ್ರಿಲ್‍ನಿಂದ ಸೆಪ್ಟೆಂಬರ್ ನಡುವೆ ಬೀಸುವ ನೈರುತ್ಯ ಮಾನ್‍ಸೂನ್ ಮಾರುತಗಳಿಂದ ಇಲ್ಲಿ ಮಳೆಯಾಗುತ್ತದೆ. ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಸೆಖೆಯಿದ್ದು ಉಷ್ಣತೆ ಸರಾಸರಿ 28(ಅ ಇರುತ್ತದೆ. ಚಳಿಗಾಲ ಆಹ್ಲಾದಕರವಾಗಿದ್ದು ತೇವಾಂಶ ಕಡಿಮೆಯಿರುತ್ತದೆ. ಅತಿ ಹೆಚ್ಚು ಚಳಿ ಜನವರಿಯಲ್ಲಿದ್ದು ಸರಾಸರಿ ಉಷ್ಣತೆ 15(ಅ ಇರುತ್ತದೆ. ನವೆಂಬರ್ ತಿಂಗಳಿನ ವಾತಾವರಣ ಅತ್ಯಂತ ಸುಖಕರವಾದ್ದು. ಮಕಾವೊ ಜನರಲ್ಲಿ ಬಲುಪಾಲು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರು. ಇಲ್ಲಿರುವ ಪೋರ್ಚುಗೀಸರ ಸಂಖ್ಯೆ ಬಲು ಕಡಿಮೆ. ಇವರಲ್ಲೂ ಹೆಚ್ಚು ಜನ ಇತರ ಪೋರ್ಚುಗೀಸ್ ಸಾಗರೋತ್ತರ ಪ್ರಾಂತಗಳಿಂದ ಬಂದವರು. ಸ್ಥಳೀಯರಲ್ಲಿ ಚೀನಿಯರೇ ಹೆಚ್ಚು.

	ಮಕಾವೊದ ಆರ್ಥಿಕ ಪರಿಸ್ಥಿತಿ ವ್ಯಾಪಾರ ವ್ಯವಹಾರಗಳ ಮೇಲೆ ಅವಲಂಬಿತವಾದ್ದು. ಇದು ಮುಕ್ತಬಂದರಾಗಿದ್ದು ವ್ಯಾಪಾರ ಚೀನ ಸರ್ಕಾರದ ಅಧಿಕಾರಕ್ಕೊಳಪಟ್ಟಿದೆ. ಮೀನುಗಾರಿಕೆ ಇಲ್ಲಿಯ ಪ್ರಮುಖ ಉದ್ಯಮ. ಇತ್ತೀಚೆಗೆ ಚೀನಾದ ಒತ್ತಾಯದಿಂದ ಇಲ್ಲಿಯ ಜನ ತಾವು ಹಿಡಿದ ಮೀನಿನ ಒಂದು ಭಾಗವನ್ನು ಚೀನೀ ಕಮ್ಯೂನ್‍ಗಳಿಗೆ ಕೊಡಬೇಕಾಗಿದೆ. ಅಲ್ಲದೆ ಚೀನ ಮಕಾವೊ ಮೂಲಕ ಬರುವ ವಸ್ತುಗಳಿಗೆ ಪ್ರವೇಶ ಪ್ರತಿಬಂದಿಸಿರುವುದರಿಂದ ಇಲ್ಲಿಯ ವ್ಯಾಪಾರದ ಮಾದರಿಯೂ ಬದಲಾಗಿದೆ. ಇಷ್ಟಾದರೂ ಚೀನ ಮಕಾವೊಗೆ ಆಹಾರಪದಾರ್ಥಗಳು, ಬಟ್ಟೆ, ಆಟದ ಸಾಮಾನುಗಳು, ಅಗ್ಗದ ವಿದ್ಯುತ್ ಉಪಕರಣ ಮುಂತಾದವನ್ನು ಒದಗಿಸುವುದರಿಂದ ಮಕಾವೊಗೆ ಚೀನದ ಸ್ನೇಹ ಬೇಕಾಗಿದೆ. ಹಾಂಗ್‍ಕಾಂಗ್ ಬಿಟ್ಟರೆ ಮಕಾವೊ ಪ್ರಾಂತವೇ ಚೀನಾದಿಂದ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶ. 1950ರಿಂದೀಚೆಗೆ ಮಕಾವೊದಲ್ಲಿ ಕೈಗಾರಿಕೆಗಳು ಪ್ರಾರಂಭವಾಗಿವೆ. 1957ರಿಂದ ಇಲ್ಲಿ ತಯಾರಾದ ಕೈಗಾರಿಕಾ ವಸ್ತುಗಳನ್ನು ಅನಿರ್ಬಂಧಿತವಾಗಿ ಪೋರ್ಚುಗೀಸ್ ಸಾಗರೋತ್ತರ ಪ್ರಾಂತಗಳಿಗೆ ಒಯ್ಯಲು ಅವಕಾಶ ನೀಡಲಾಗಿರುವುದರಿಂದ ಮಕಾವೊದ ರಫ್ತು ವ್ಯಾಪಾರ ಬಹಳವಾಗಿ ಅಭಿವೃದ್ಧಿ ಹೊಂದಿದೆ. ಪಾದರಕ್ಷೆ, ಎನಾಮಲ್ ಸಾಮಾನುಗಳು, ಚೀನೀ ದ್ರಾಕ್ಷಾರಸ, ಪಟಾಕಿಗಳು, ಅಗರ್ ಬತ್ತಿ, ಕರ್ಪೂರ ಮರದ ಪೆಠಾರಿ ಇತ್ಯಾದಿ ಇಲ್ಲಿ ತಯಾರಾಗುವ ವಸ್ತುಗಳು.

	ಮಕಾವೊ ಜೂಜು ಮತ್ತು ಕಳ್ಳ ಸಾಗಾಣಿಕೆಗೆ ಪ್ರಸಿದ್ಧ. ಇಲ್ಲಿಗೆ ತರಲಾಗುವ ಚಿನ್ನದ ಇಟ್ಟಿಗೆಗಳನ್ನು ಸುಲಭವಾಗಿ ಒಯ್ಯಬಹುದಾದ ಆಕಾರಕ್ಕೆ ಬದಲಾಯಿಸಿ ಭಾರತ, ಚೀನ ಮತ್ತು ಆಗ್ನೇಯ ಏಷ್ಯದ ರಾಜ್ಯಗಳಿಗೆ ಒಯ್ಯಲಾಗುತ್ತದೆ. ಹಾಂಗ್‍ಕಾಂಗ್ ಮತ್ತು ಚೀನಾಗಳಲ್ಲಿ ಜೂಜುಗಾರಿಕೆಯನ್ನು ಪ್ರತಿಬಂಧಿಸಲಾಗಿರುವುದರಿಂದ ಇಲ್ಲಿಯ ಕ್ಯಾಸಿನೋಗಳಿಗೆ ಸಾವಿರಾರು ಪ್ರವಾಸಿಗಳು ಬರುತ್ತಾರೆ. ಈ ಕಾರಣದಿಂದಾಗಿ ಇಲ್ಲಿ ಪ್ರವಾಸೋದ್ಯಮ ಭರದಿಂದ ಬೆಳೆದಿದೆ. ಇಲ್ಲಿಯ ಕ್ಯಾಸಿನೋಗಳಲ್ಲಿ ಎಲ್ಲ ಬಗೆಯ ಜೂಜಾಟಗಳನ್ನು ಆಡುವ ಅವಕಾಶವಿದ್ದು 24 ಗಂಟೆಗಳೂ ತೆರೆದಿರುತ್ತವೆ. ಕಾರ್ಡಿಗೆ ಬದಲು ಚಿತ್ರಗಳು ಬರೆದಿರುವ ಬಿಲ್ಲೆಗಳಿಂದ ಆಡಲಾಗುವ ದಿಮ್ಮಿಯನ್ನು ಹೋಲುವ ಮಾಹ್‍ಜೋಂಗ್ ಎಂಬ ಆಟ ಜನಪ್ರಿಯವಾಗಿದೆ. ಇಲ್ಲಿಯ ಜೂಜಾಟಗಳೆಲ್ಲವೂ ಸರ್ಕಾರದಿಂದ ರಹದಾರಿ ಪಡೆದಿರುವ ಮಂಡಲಿಯ ಅಧೀನದಲ್ಲಿದ್ದು ಈ ಮಂಡಲಿ ವರ್ಷಕ್ಕೆ 10,00,000 ಡಾಲರುಗಳಷ್ಟು ತೆರಿಗೆ ಕೊಡುತ್ತದೆ ಮತ್ತು ಹೊರಬಂದರಿನ ಸಂರಕ್ಷಣೆ ಹಾಗೂ ಹಾಂಗ್‍ಕಾಂಗ್‍ಗೆ ಸಾರಿಗೆ ವ್ಯವಸ್ಥೆ ನಡೆಸುವ ಹೊಣೆ ಹೊತ್ತಿದೆ. ಇಲ್ಲಿ ಚಲಾವಣೆಯಲ್ಲಿರುವ ಹಣ ಪಟಾಕ.

	ಹಾಂಗ್‍ಕಾಂಗ್‍ನಿಂದ ಇಲ್ಲಿಗೆ ಅರ್ಧಗಂಟೆಗೊಂದು ಬಾರಿ ದೋಣಿ ಸಂಚಾರವಿದ್ದು ಪ್ರಯಾಣದ ಕಾಲ ಕೇವಲ ಒಂದು ಗಂಟೆ ಮಾತ್ರ. ಪರ್ಯಾಯದ್ವೀಪದಿಂದ ಟೈಪಾ ಮತ್ತು ಕೊಲೋನ್ ದ್ವೀಪಗಳಿಗೆ ನಾಲೆಗಳ ಸಂಚಾರವಿದೆ. ಆಂತರಿಕ ಸಾರಿಗೆ ವ್ಯವಸ್ಥೆ ಚೆನ್ನಾಗಿದ್ದು ಟೈಪಾ ಮತ್ತು ಕೊಲೋನ್‍ಗಳ ನಡುವೆ ಮೋಟಾರುಗಳು ಸಂಚರಿಸಲು ಸಾಧ್ಯವಾಗುವಂಥ ಒಡ್ಡು ದಾರಿಯಿದೆ.

	ಮಕಾವೊನಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳಿಂದ ಕೂಡಿದ ಶಾಸನ ಸಭೆಯ ಸಲಹೆ ಮೇರೆ ಪೋರ್ಚುಗೀಸ್ ಗವರ್ನರ್ ಆಡಳಿತ ನಡೆಸುತ್ತಾನೆ. ಈ ಪ್ರಾಂತ ಪೋರ್ಚುಗೀಸ್ ವಾಸ್ತುಶಿಲ್ಪ ಮತ್ತು ಪದ್ದತಿಗಳ ಪ್ರಭಾವಕ್ಕೆ ಒಳಗಾಗಿದ್ದರೂ ಚೀನೀ ಸಂಸ್ಕøತಿಯ ಲಕ್ಷಣಗಳನ್ನು ಉಳಿಸಿಕೊಂಡಿದೆ. ಶಿಕ್ಷಣ ಕಡ್ಡಾಯವಿಲ್ಲ. ಆದರೂ 10 ವರ್ಷಗಳಿಗೆ ಮೇಲ್ಪಟ್ಟವರಲ್ಲಿ ಶೇಕಡಾ 80ರಷ್ಟು ಅಕ್ಷರಸ್ಥರಿದ್ದಾರೆ. ಇಲ್ಲಿ ಚೀನೀ ನಾಯಕ ಸನ್ ಯಾತ್ ಸೆನ್‍ನ ಪ್ರತಿಮೆಯಿದೆ. ಮಕಾವೊ ರಾಷ್ಟ್ರೀಯ ಗ್ರಂಥಾಲಯ, ಸರ್ ರಾಬರ್ಟ್ ಹೊಟಂಗ್ ಚೀನೀ ಗ್ರಂಥಾಲಯ ಮತ್ತು 16ನೆಯ ಶತಮಾನದ ಪೋರ್ಚುಗೀಸ್ ಕವಿಯ ಹೆಸರಿನ ಒಂದು ವಸ್ತುಸಂಗ್ರಹಾಲಯ ನೋಡತಕ್ಕವು. ಹಾಂಗ್‍ಕಾಂಗ್‍ನಿಂದ ಮಾಡಲಾಗುವ ಪ್ರಸಾರಗಳನ್ನು ಇಲ್ಲಿಯ ದೂರದರ್ಶಕದಲ್ಲಿ ನೋಡಬಹುದು. ಇಲ್ಲಿಂದ ಕಮ್ಯೂನಿಸ್ಟ್ ಪರ ಹಾಗೂ ವಿರೋಧಿ ಚೀನಿ ಪತ್ರಿಕೆಗಳು ಪ್ರಕಟವಾಗುತ್ತಿವೆ. ಇಂಗ್ಲಿಷ್ ಪತ್ರಿಕೆಗಳು ಹಾಂಗ್‍ಕಾಂಗ್‍ನಿಂದ ಬರುತ್ತವೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ